: 08282- 256301/256307

ಕುವೆಂಪು ವಿಶ್ವವಿದ್ಯಾಲಯ 1987ರಲ್ಲಿ ಅಸ್ತಿತ್ವಕ್ಕೆ ಬಂದ ಕುವೆಂಪು ವಿಶ್ವವಿದ್ಯಾಲಯವು ಸಂಯೋಜನೆ ನೀಡುವ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ದಿಂದ 2(f) ಮತ್ತು 12(b) ಅಡಿಯಲ್ಲಿ ಮನ್ನಣೆಯನ್ನು ಪಡೆದಿದೆ. ಈ ವಿಶ್ವವಿದ್ಯಾಲಯವು ಕನ್ನಡದ ಶ್ರೇಷ್ಠ ಬರಹಗಾರರಾದ ಶ್ರೀ ಕುವೆಂಪು ಅವರ ಹೆಸರನ್ನು ಹೊತ್ತಿದೆ. ಅದು ತನ್ನದೇ ಆದ ವಿಶಿಷ್ಟ ಶೈಕ್ಷಣಿಕ ವ್ಯಕ್ತಿತ್ವ ಹಾಗೂ ಸಾಂಸ್ಕೃತಿಕ ಗುರುತನ್ನು ಪಡೆದುಕೊಂಡಿದೆ. ಕನ್ನಡದ ಮೇರು ಬರಹಗಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಆಧುನಿಕ ಭಾರತದ ಅತ್ಯಂತ ಮಹತ್ವಪೂರ್ಣ ಸಾಂಸ್ಕೃತಿಕ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಶ್ರೀ ಕುವೆಂಪು ಅವರ ಬಹುಮುಖಿ ವ್ಯಕ್ತಿತ್ವದಿಂದ ವಿಶ್ವವಿದ್ಯಾಲಯವು ತನ್ನ ಅನನ್ಯ ವ್ಯಕ್ತಿತ್ವದ ಚಹರೆಗಳನ್ನು ಪಡೆದುಕೊಂಡಿದೆ.

ಕುವೆಂಪು ವಿಶ್ವವಿದ್ಯಾಲಯವು ಸ್ಥಳೀಯ ಹಾಗೂ ವಿಶ್ವಾತ್ಮಕ, ಪ್ರಾಂತೀಯ ಹಾಗೂ ಅಖಿಲ ಭಾರತೀಯ ಸತ್ವಗಳ ಸಂಗಮವಾಗಿದ್ದು ಸಂಪ್ರದಾಯಗಳಿಂದ ಪೋಷಣೆಯನ್ನು ಪಡೆದು ಆಧುನಿಕತೆಯ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದೆ. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸೌಲಭ್ಯವಂಚಿತರಾಗಿರುವವರ ಬಗ್ಗೆ ಆಳವಾದ ಬದ್ಧತೆಯನ್ನು ಹೊಂದಿದೆ; ಅದೇ ಹೊತ್ತಿಗೆ ಶ್ರೇಷ್ಠತೆಯ ಬಗ್ಗೆ ಕಾಳಜಿಯನ್ನು ಹೊಂದಿದೆ.

ವಿಶ್ವವಿದ್ಯಾಲಯದ ಲಾಂಛನವು ಆನೆಯ ಸೊಂಡಿಲು ಹಾಗೂ ಹಂಸದ ಶರೀರವನ್ನು ಹೊಂದಿರುವ ಪೌರಾಣಿಕ ಪ್ರಾಣಿಯ ಸಂಕೇತವಾಗಿದೆ. ಇದನ್ನು ‘ಗಜಹಂಸ’ವೆಂದು ಕರೆಯಲಾಗಿದ್ದು, ಅದು ವಿಜಯನಗರ ಹಾಗೂ ಕೆಳದಿ ಶಿಲ್ಪ ಮತ್ತು ದೇವಾಲಯ ಕಲೆಯಲ್ಲಿ ಕಂಡುಬರುತ್ತದೆ. ಅದು ಜ್ಞಾನ ಹಾಗೂ ಸಂಪತ್ತಿನ ಸಂಶ್ಲೇಷಣೆಯನ್ನು ಸಂಕೇತಿಸುತ್ತದೆ.

ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯು (Jurisdiction) ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದೆ.

ಕುವೆಂಪು ವಿಶ್ವವಿದ್ಯಾಲಯವು ವಿಶಿಷ್ಟವಾದ ಶೈಕ್ಷಣಿಕ ವ್ಯಕ್ತಿತ್ವವನ್ನು ಹೊಂದಿದ್ದು ಗ್ರಾಮೀಣ ಪರಿಸರದೊಂದಿಗೆ ಆಧುನಿಕ ಪ್ರಜ್ಞೆಯನ್ನು ಮೇಳವಿಸಿಕೊಂಡಿದೆ. ವಿವಿಧ ಜ್ಞಾನಶಿಸ್ತುಗಳಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್ಡಿ.Course ಗಳನ್ನು ಅದು ನೀಡುತ್ತದೆ. ಕಲಾ, ವಾಣಿಜ್ಯ, ಶಿಕ್ಷಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯಗಳಿಗೆ ಸೇರಿದ 35 ಸ್ನಾತಕೋತ್ತರ ವಿಭಾಗಗಳನ್ನು ಹೊಂದಿದೆ.

ಜ್ಞಾನ ಸಹ್ಯಾದ್ರಿ ಆವರಣದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕೇಂದ್ರವಿದೆ. ಉನ್ನತ ಶಿಕ್ಷಣಕ್ಕೆ ಸಮರ್ಪಕವಾದ ವಾತಾವರಣವನ್ನು ಒದಗಿಸುವ 230 ಎಕರೆ ವಿಸ್ತೀರ್ಣ ಹೊಂದಿರುವ, ಕಂಗೊಳಿಸುವ ಹಸಿರಾದ ಕಣ್ಸೆಳೆಯುವ ಆವರಣವು ಇದಾಗಿದೆ. ಇಲ್ಲಿಯ ಭೂವಿನ್ಯಾಸದೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಏರುದಿನ್ನೆಗಳ ಮೇಲೆ, ಗುಡ್ಡಗಳ ಮೇಲೆ ಮುಖ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇಡೀ ಆವರಣವು ಎಲ್ಲಾ ಬಗೆಯ ಮಾಲಿನ್ಯಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಉನ್ನತ ಶಿಕ್ಷಣ ಹಾಗೂ ಸಂಶೋಧನೆಗೆ ಅವಶ್ಯಕವಾದ ಪ್ರಶಾಂತವಾದ ಹಾಗೂ ಆಹ್ಲಾದಕರವಾದ ವಾತಾವರಣವು ಇಲ್ಲಿದೆ.

ಸ್ನಾತಕೋತ್ತರ ಕೇಂದ್ರ, , ಕಡೂರು

 

ಗ್ರಾಮೀಣ ಭಾಗದ ಯುವ ಜನರಿಗೆ ಉನ್ನತ ಶಿಕ್ಷಣದ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಕಡೂರಿನ ಬಸವನಗರದಲ್ಲಿ ಕುವೆಂಪು ವಿಶ್ವವಿದ್ಯಾಲಯವು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದೆ. ಕೇಂದ್ರದ 65 ಎಕರೆ ವಿಸ್ತೀರ್ಣದ ಆವರಣವು ಕಡೂರು ಪಟ್ಟಣದಿಂದ 7 ಕಿ.ಮೀ. ದೂರದಲ್ಲಿದ್ದು ಶಿವಮೊಗ್ಗ-ಬೆಂಗಳೂರು ಹೆದ್ದಾರಿಗೆ ಸಮೀಪದಲ್ಲಿದೆ. ಎಂ.ಕಾಂ., ಎಂ.ಎ. ಅರ್ಥಶಾಸ್ತ್ರ, ಎಂ.ಎಸ್ಸಿ. ರಸಾಯನಶಾಸ್ತ್ರ ಹಾಗೂ ಎಂ.ಎಸ್ಸಿ. ಔಷಧೀಯ ರಸಾಯನ ಶಾಸ್ತ್ರ (Pharmaceutical Chemistry) ಸ್ನಾತಕೋತ್ತರ ಕೋರ್ಸುಗಳನ್ನು ಇಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿವೆ.ೆ

ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು

 

‘ಎಲ್ಲರಿಗೂ ಶಿಕ್ಷಣ’ ಎನ್ನುವ ತನ್ನ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ಮತ್ತು ಗ್ರಾಮೀಣ ಯುವಜನರಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಚಿಕ್ಕಮಗಳೂರಿನಲ್ಲಿ ಇನ್ನೊಂದು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದೆ. ಎಂ.ಕಾಂ., ಎಂ.ಎ. ಕನ್ನಡ, ಎಂ.ಎ. ರಾಜ್ಯಶಾಸ್ತ್ರ ಹಾಗೂ ಎಂ.ಎ. ಗಣಿತ ವಿಜ್ಞಾನ ಕೋರ್ಸುಗಳನ್ನು ಈ ಕೇಂದ್ರದಲ್ಲಿ ಬೋಧಿಸಲಾಗುತ್ತಿದೆ.

ಸಂಯೋಜಿತ ಕಾಲೇಜುಗಳು

 

ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯಲ್ಲಿ ಸಂಯೋಜನೆ ಪಡೆದಿರುವ 99 ಕಾಲೇಜುಗಳಿವೆ. ಇವುಗಳಲ್ಲಿ 3 ಘಟಕ ಕಾಲೇಜುಗಳು, 30 ಸರಕಾರಿ ಕಾಲೇಜುಗಳು ಹಾಗೂ 65 ಖಾಸಗಿ ಕಾಲೇಜುಗಳು ಮತ್ತು ಒಂದು ವಿಶ್ವವಿದ್ಯಾಲಯದ ನೇರ ಆಡಳಿತಕ್ಕೆ ಒಳಪಟ್ಟ ಕಾಲೇಜು ಸೇರಿವೆ. ಅವುಗಳಲ್ಲಿ 18 ಕಾಲೇಜುಗಳು B.Ed. ಕೋರ್ಸನ್ನು ಬೋಧಿಸುತ್ತವೆ. 35 ಕಾಲೇಜುಗಳು NAAC ನಿಂದ ಮೌಲ್ಯಾಂಕನವನ್ನು ಪಡೆದಿವೆ. 47 ಕಾಲೇಜುಗಳು ಯು.ಜಿ.ಸಿ.ಯ 2(f) ಹಾಗೂ 12(b) ಅಡಿಯಲ್ಲಿ ಮಾನ್ಯತೆ ಪಡೆದಿವೆ.

ಘಟಕ ಕಾಲೇಜುಗಳು

 

ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಾಗೂ ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಇವುಗಳು ಹಿಂದೆ ಸರಕಾರಿ ಸಂಸ್ಥೆಗಳಾಗಿದ್ದು ಈಗ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿವೆ. ಈ ಕಾಲೇಜುಗಳು ಹಳೆಯ ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಹಲವಾರು ಗಣ್ಯರಿದ್ದಾರೆ. ಡಾ. ಯು.ಆರ್. ಅನಂತಮೂರ್ತಿ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು), ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ (ಭಾರತರತ್ನ ಪುರಸ್ಕೃತರು), ಶ್ರೀ ಕೆ.ವಿ. ಸುಬ್ಬಣ್ಣ (ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು), ಶ್ರೀ ಡಿ.ಎಚ್. ಶಂಕರಮೂರ್ತಿ (ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸ್ಪೀಕರ್ ಮತ್ತು ಮಾಜಿ ಶಿಕ್ಷಣ ಸಚಿವರು, ಕರ್ನಾಟಕ ರಾಜ್ಯ) ಮುಂತಾದವರು ಇವರಲ್ಲಿ ಸೇರಿದ್ದಾರೆ. ಯು.ಜಿ.ಸಿ. ಯಿಂದ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳು “College with Potential for Excellence” ಮನ್ನಣೆ ಪಡೆದಿವೆ. ಈ ಕಾಲೇಜುಗಳು ವಜ್ರಮಹೋತ್ಸವವನ್ನು ಆಚರಿಸಿವೆ.

ದೂರ ಶಿಕ್ಷಣ ನಿರ್ದೇಶನಾಲಯ (ಡಿಡಿಇ)

 

ವಿಶ್ವವಿದ್ಯಾಲಯ ಹಾಗೂ ಸಮಾಜಗಳ ಸಂಬಂಧವನ್ನು ಪೋಷಿಸುವ ಹಾಗೂ ‘ಎಲ್ಲರಿಗೂ ಶಿಕ್ಷಣ’ ವೆನ್ನುವ ತನ್ನ ಧ್ಯೇಯವನ್ನು ಸಾಧಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ದೂರ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿದ್ದು ಇದರ ಮೂಲಕ ಅನೇಕ ವಿಷಯಗಳಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಜಿ. ಡಿಪ್ಲೋಮಾ ಕೋರ್ಸುಗಳನ್ನು ನೀಡಲಾಗುತ್ತಿದೆ. ಉನ್ನತ ಶಿಕ್ಷಣವನ್ನು ಪಡೆಯಬಯಸುವವರ ಮನೆಯ ಹೊಸ್ತಿಲಿಗೆ ಗುಣಮಟ್ಟದ ಶಿಕ್ಷಣವನ್ನು ಕೊಂಡೊಯ್ಯುವ ಉದ್ದೇಶವನ್ನು ನಿರ್ದೇಶನಾಲಯವು ಕಾರ್ಯರೂಪಕ್ಕೆ ತರುತ್ತಿದೆ.

ಪ್ರಸಾರಾಂಗ

 

ವಿಶ್ವವಿದ್ಯಾಲಯದ ಪ್ರಕಾಶನಾ ಅಂಗವಾದ ಪ್ರಸಾರಾಂಗವು ಜ್ಞಾನದ ಪ್ರಸರಣ ಹಾಗೂ ಹೊರಗಣ ಸಮಾಜದ ಜೊತೆಗೆ ಅರಿವಿನ ಸೇತುವೆಗಳನ್ನು ಕಟ್ಟುವ ಅರ್ಥಪೂರ್ಣ ಕೆಲಸವನ್ನು ನಿರ್ವಹಿಸುತ್ತಿದೆ. ಪ್ರಧಾನವಾಗಿ ಪ್ರಸಾರಾಂಗವು ವಿಸ್ತರಣಾ ಉಪನ್ಯಾಸಗಳು, ಪುಸ್ತಕ ಪ್ರಕಟಣೆ ಹಾಗೂ ವಿಶ್ವವಿದ್ಯಾಲಯದ ಮಾಹಿತಿಪತ್ರ ಮತ್ತು ವಿದ್ವತ್ ಪತ್ರಿಕೆಗಳನ್ನು ಪ್ರಕಟಿಸುವ ಕೆಲಸಗಳನ್ನು ನಿರ್ವಹಿಸುತ್ತದೆ.

ಕೆಳದಿ ವಸ್ತು ಸ೦ಗ್ರಾಲಯ

 

ವಿಭಿನ್ನ ಹಸ್ತಪ್ರತಿಗಳು, ಶಿಲ್ಪಗಳು ಹಾಗೂ ವರ್ಣಚಿತ್ರಗಳೊಂದಿಗೆ ತನ್ನದೇ ಆದ ಪ್ರಕಾಶನ ವಿಭಾಗವನ್ನು ಹೊಂದಿರುವ ಈ ವಸ್ತುಸಂಗ್ರಹಾಲಯವು ವಿಶಿಷ್ಟವಾಗಿದೆ. ಇಲ್ಲಿ 2500 ತಾಳೆಗರಿ ಹಸ್ತಪ್ರತಿಗಳು, ಕನ್ನಡ, ಸಂಸ್ಕೃತ ಮತ್ತು ತೆಲುಗು ಲಿಪಿಗಳಲ್ಲಿರುವ ಸಾವಿರಾರು ಕಾಗದದ ಹಸ್ತಪ್ರತಿಗಳು ಮತ್ತು ತಿಗಳಾರಿ ಲಿಪಿಗಳಲ್ಲಿರುವ 400 ತಾಳೆಗರಿ ಹಸ್ತಪ್ರತಿಗಳಿವೆ. ಸಂಶೋಧಕರಿಗೆ ಇಲ್ಲಿ ಸಂಶೋಧನೆಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ.

ವೀಡಿಯೊಗಳು