image descriptionಪ್ರೊ. ಶರತ್ ಅನಂತಮೂರ್ತಿ
ಕುಲಪತಿಗಳು
 

ಪ್ರಿಯ ವಿದ್ಯಾರ್ಥಿಗಳೆ,

ಕುವೆಂಪು ವಿಶ್ವವಿದ್ಯಾಲಯವು ಬೋಧನೆ ಮತ್ತು ಸಂಶೋಧನೆಗಾಗಿರುವ ಒಂದು ಚೈತನ್ಯ ಶೀಲ ಮತ್ತು ಕ್ರಿಯಾಶೀಲ ವಿಶ್ವವಿದ್ಯಾಲಯವಾಗಿದ್ದು ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಸ್ಥಿತವಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಬೋಧಕ ವರ್ಗದವರ ಶ್ರೇಷ್ಠತೆ, ವಿದ್ವತ್, ಕ್ರಿಯಾಶೀಲ ಚಟುವಟಿಕೆಗಳು ಮತ್ತು ಅತ್ಯುತ್ತಮ ಸಂಶೋಧನೆಗಾಗಿ ತನ್ನ ಬದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಹೆಮ್ಮೆ ಎನಿಸುತ್ತದೆ. ವೈವಿಧ್ಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಂದು ವಿಶಿಷ್ಟ ಮತ್ತು ಪ್ರೇರಣಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ.. “ಎಲ್ಲರಿಗೂ ಪರಿಪೂರ್ಣ ಶಿಕ್ಷಣ” ಎಂಬ ಧ್ಯೇಯದೊಂದಿಗೆ 1987 ರಿಂದಲೂ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾಲಯವು ಒದಗಿಸುತ್ತಾ ಬಂದಿದೆ. ನಮ್ಮ ಮೌಲ್ಯಗಳು ಶೋಧನೆ, ಕ್ರಿಯಾಶೀಲತೆ, ಶ್ರೇಷ್ಠತೆ, ಪ್ರಾಮಾಣಿಕತೆ ಮತ್ತು ಮಾನವ ಸೇವೆಯ ಜೊತೆಗೆ ಸಮಾಜ ಕಲ್ಯಾಣದ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವುದು ಸಹ ಶಿಕ್ಷಣದ ಉದ್ದೇಶಗಳಲ್ಲಿ ಒಂದು ಎಂಬುದು ನಮ್ಮ ಧ್ಯೇಯೋದ್ದೇಶ.

ನಮ್ಮ ವಿಶ್ವವಿದ್ಯಾಲಯದಲ್ಲಿ ಎಲ್ಲ ಅತ್ಯಾಧುನಿಕ ಮೂಲ ಸೌಲಭ್ಯಗಳು ಲಭ್ಯವಿದೆ. ಅವುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂಗಳು, ಸುಸಜ್ಜಿತ ಪ್ರಯೋಗಾಲಯಗಳು, ಅತುತ್ತಮ ಗ್ರಂಥಾಲಯ, ಅಂತರ್‍ಜಾ¯ ಸೌಲಭ್ಯ, ಬ್ರೌಸಿಂಗ್ ಕೇಂದ್ರ, ವಿದ್ಯಾರ್ಥಿ ನಿಲಯಗಳು, ಕ್ರೀಡಾ ಸೌಲಭ್ಯಗಳು, ಆರೋಗ್ಯ ಕೇಂದ್ರ ಮತ್ತು ಇತರ ಅತ್ಯಾವಶ್ಯಕ ಸೌಲಭ್ಯಗಳು ಸೇರಿವೆ. ಈ ವಿಶ್ವವಿದ್ಯಾಲಯದ ಅನೇಕ ಹಳೆಯ ವಿದ್ಯಾರ್ಥಿಗಳು, ಬೋಧಕ ವರ್ಗದವರು ಮತ್ತು ಸಂಶೋಧನಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಮೂಲಕ ವಿಶ್ವವಿದ್ಯಾಲಯದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಪಸರಿಸಿರುತ್ತಾರೆ. ಸಮಕಾಲೀನ ಅವಶ್ಯಕತೆಗಳಿಗೆ ಅನುಗುಣವಾಗಿ ಮತ್ತು ಪ್ರಾಯೋಗಿಕವಾಗಿ ಅನ್ವಯಿಕ ಅಂಶಗಳನ್ನು ಒಳಗೊಂಡ ಪಠ್ಯಕ್ರಮವನ್ನು ರೂಪಿಸುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ನಮ್ಮ ಬದ್ದತೆ. ನಮ್ಮ ಕಲಿಕಾ-ಬೋಧನಾ ಚಟುವಟಿಕೆಗಳಲ್ಲಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸಮ್ಮೇಳನಗಳು, ಕಮ್ಮಟಗಳು, ವಿಶೇಷ ಉಪನ್ಯಾಸಗಳು ಮತ್ತು ಇತರ ಪೂರಕ ಕಾರ್ಯಕ್ರಮಗಳು ಸೇರಿವೆ. ವಿಶ್ವವಿದ್ಯಾಲಯವು ಇತರ ಅನೇಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದು ಅಲ್ಲದೇ ಬೋಧಕ ವರ್ಗದವರು ಸಹ ಇತರೆ ಸಂಸ್ಥೆಗಳ ಸಾಧಕರ ಜೊತೆ ಸಂಪರ್ಕ ಹೊಂದಿ ತನ್ಮೂಲಕ ವಿದ್ಯಾರ್ಥಿಗಳ ಜ್ಞಾನವರ್ಧನೆ ಜೊತೆಗೆ ಕಲಿಕೆಯ ಹೊಸ ಆಯಾಮಗಳನ್ನು ಒದಗಿಸುತ್ತಿದ್ದಾರೆ.

ನೀವೆಲ್ಲರೂ ಈ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಇಚ್ಛಿಸಿರುವುದು ನನಗೆ ಸಂತೋಷ ತಂದಿದೆ. ವಿಶ್ವವಿದ್ಯಾಲಯದ ಬೋಧಕರು, ಅಧಿಕಾರಿ, ನೌಕರರ ಪರವಾಗಿ ತಮಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ. ತಮ್ಮ ಶೈಕ್ಷಣಿಕ ಪಯಣಕ್ಕೆ ನನ್ನ ಅಭಿನಂದನೆಗಳು. ಈ ವಿಶ್ವವಿದ್ಯಾಲಯದಲ್ಲಿರುವ ಅನೇಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮೆಲ್ಲ ಕನಸುಗಳನ್ನು ನನಸಾಗಿಸಿಕೊಳ್ಳುವಿರೆಂದು ಮತ್ತು ನಿಮ್ಮ ಉದ್ದೇಶಿತ ಗುರಿಯನ್ನು ತಲುಪಿವಿರೆಂದು ಆಶಿಸುತ್ತೇನೆ.

ಜ್ಞಾನದ ಈ ಅಭಯಾರಣ್ಯಕ್ಕೆ ಸ್ವಾಗತ.

ಪ್ರೊ. ಶರತ್ ಅನಂತಮೂರ್ತಿ ಕುಲಪತಿ, ಕುವೆಂಪು ವಿಶ್ವವಿದ್ಯಾಲಯ.